ಬರ್ಲಿನ್
	ಜರ್ಮನ್ ರಾಷ್ಟ್ರದ ರಾಜಧಾನಿ. ಪ್ರಮುಖ ಆಡಳಿತ ಕೇಂದ್ರ ಮಹಾನಗರ. ವಿಸ್ತೀರ್ಣ 883. ಚ.ಕಿ.ಮೀ. ಜನಸಂಖ್ಯೆ 3,433695 (2001). ಎರಡನೆ ಮಹಾಯುದ್ಧದ ನಂತರ ಪೂರ್ವ, ಪಶ್ಚಿಮ ಬರ್ಲಿನ್ ಎಂದು ಎರಡು ಭಾಗವಾಗಿದ್ದ ಈ ಮಹಾನಗರ 1990 ಅಕ್ಟೋಬರ್‍ನಲ್ಲಿ ಪೂರ್ವಪಶ್ಚಿಮ ಜರ್ಮನಿಯು ಒಗ್ಗೂಡಿ ಒಂದು ಸಂಯುಕ್ತ ಗಣರಾಜ್ಯವಾದಾಗ ಬರ್ಲಿನ್ ಒಂದಾಗಿ ಈ ರಾಷ್ಟ್ರದ ರಾಜಧಾನಿ ಹಾಗೂ ಆಡಳಿತ ಕೇಂದ್ರ ನಗರವಾಯಿತು.

	ಹಿಂದಿನ ಪಶ್ಚಿಮ ಬರ್ಲಿನ್ ಮತ್ತು ಪೂರ್ವ ಬರ್ಲಿನ್‍ನ ಇತಿಹಾಸ ಹಾಗೂ ವಿವರ ಇಂದಿನ ಒಗ್ಗೂಡಿದ ಬರ್ಲಿನ್ ವಿವರವೇ ಆಗಿದೆ.	

ಪಶ್ಚಿಮ ಬರ್ಲಿನ್: ಪಶ್ಚಿಮ ಜರ್ಮನ್ ಸಂಯುಕ್ತ ಗಣರಾಜ್ಯದ 11ನೆಯ ರಾಜ್ಯ, ವಿಸ್ತೀರ್ಣ 479 ಚಕಿಮೀ, ಪೂರ್ವ ಜರ್ಮನಿಯ ಮಧ್ಯದಲ್ಲಿ ಒಂದು ದ್ವೀಪದಂತೆ ಇರುವುದರಿಂದ ಈ ನಗರವಾಸಿಗಳು ತಾವು ದ್ವೀಪವಾಸಿಗಳು ಎಂದು ಕರೆದುಕೊಳ್ಳುತ್ತಾರೆ. ಸುಮಾರು 177 ಕಿಮೀ ದೂರದಲ್ಲಿರುವ ಪಶ್ಚಿಮ ಜರ್ಮನಿಯೊಂದಿಗೆ ಸಂಪರ್ಕ ಕೆಲವು ರಸ್ತೆ. ಸಮುದ್ರ ಹಾಗೂ ವಿಮಾನ ಮಾರ್ಗಗಳ ಮೂಲಕ ಮಾತ್ರ. ಪಶ್ಚಿಮದ ಪ್ರದರ್ಶನ ಪೆಟ್ಟಿಗೆ ಎಂದು ಕರೆಯುವ ಪಶ್ಚಿಮ ಬರ್ಲಿನ್ ಈಗ ಯೂರೊಪಿನ ಅತ್ಯಂತ ಸುಂದರ ನಗರಗಳಲ್ಲಿ ಒಂದು. ದ್ವಿತೀಯಮಹಾಯುದ್ಧನಂತರ ನಗರದ ಪುನಾರಚನೆ ನಡೆದು ದೊಡ್ಡ ರಸ್ತೆಗಳು, ವಿಶಾಲ ಚೌಕಗಳು, ಗಗನಕ್ಕೇರಿದ ಕಟ್ಟಡಗಳ ಸಾಲುಗಳು, ಉದ್ಯಾನಗಳು ಯುದ್ಧಕಾಲದಲ್ಲಿ ಮರುಭೂಮಿಯಂತಾಗಿದ್ದ ಸ್ಥಳಗಳಲ್ಲಿ ನಿರ್ಮಾಣಗೊಂಡಿವೆ.

	ಯುದ್ಧಕಾಲದಲ್ಲಿ ದಾಳಿಗೆ ಗುರಿಯಾಗಿದ್ದ ವಸ್ತುಗಳೆಲ್ಲವನ್ನೂ ಹೊಸನಗರಕಟ್ಟಲು ಬಳಸಿಕೊಂಡರು. ಕುರ್‍ಪ್ಯೂರ್ ಸ್ಟೆನ್‍ಡಾಮ್ ಪಟ್ಟಣದ ಅತ್ಯಂತ ಸುಂದರಭಾಗ. ಅಲ್ಲಿ ನಾಟಕ ಶಾಲೆಗಳು, ಅಂಗಡಿಗಳ ಸಾಲುಗಳು ಹಾಗೂ ಈ ಬಡಾವಣೆಯ ಪೂರ್ವಭಾಗದಲ್ಲಿ ಯುದ್ಧದಲ್ಲಿ ನಾಶಗೊಂಡ ಕೈಸರ್ ವಿಲ್‍ಹೆಲ್ಮ್ ಸ್ಮಾರಕ ಚರ್ಚ್, ಅದರ ಬಳಿ ಹೊಸ ಚರ್ಚ್ ಮುಂತಾದವುಗಳಿವೆ. ಈಶಾನ್ಯದಲ್ಲಿರುವ ಟಿಯರ್ ಗಾರ್ಟನ್ ಉದ್ಯಾನದಲ್ಲಿ 1957ರಲ್ಲಿ ಕಟ್ಟಿರುವ ಬರ್ಲಿನ್ ಕಾಂಗ್ರೆಸ್ ಹಾಲ್ ಎಂಬ ಭವನವಿದೆ. 1841ರಲ್ಲಿ ಕಟ್ಟಿದ ಹಾಗೂ 2000ಕ್ಕೂ ಹೆಚ್ಚಿನ ಪ್ರಾಣಿಗಳಿರುವ ದೊಡ್ಡ ಪ್ರಾಣಿ ಸಂಗ್ರಹಾಲಯ ಈ ಉದ್ಯಾನದ ಪಶ್ಚಿಮದಲ್ಲಿದೆ. ಉದ್ಯಾನದ ಬಳ್ಳಿ 14 ರಾಷ್ಟ್ರಗಳ ಪ್ರಸಿದ್ಧ ಶಿಲ್ಪಗಳು ಕಟ್ಟಿದ ಹನ್ಸ್ 'ಅಪಾರ್ಟ್‍ಮೆಂಟ್ ವಸತಿಗೃಹಗಳ ಕಟ್ಟಡ, ಶಾಲೆಗಳು ಹಾಗೂ ಚರ್ಚುಗಳಿವೆ. ಪೂರ್ವ ಜರ್ಮನಿಯ ಮುಖಾಂತರ ಹಾದು ಹೋಗುವ ನಾಲ್ಕು ರೈಲು, ನಾಲ್ಕು ಹೆದ್ದಾರಿ ಮತ್ತು ಎರಡು ಜಲಮಾರ್ಗ ಮೂರು ವಾಯುಮಾರ್ಗಗಳೇ ಪಶ್ಚಿಮ ಬರ್ಲಿನ್ ಜನರಿಗೆ ಹೊರಗಿನ ಪ್ರಪಂಚಕ್ಕೆ ಇರುವ ಸಂಪರ್ಕಗಳು. ಪಶ್ಚಿಮ ಜರ್ಮನಿ ಮತ್ತು ಇತರ ದೇಶಗಳೊಡನೆ ಈ ಮೂಲಕವೇ ಇದರ ವ್ಯಾಪಾರ, ಸಂಪರ್ಕ ಇತ್ಯಾದಿ.

	ಕೈಗಾರಿಕ ಪ್ರಧಾನವಾಗಿರುವ ಈ ನಗರದಲ್ಲಿ 10 ಲಕ್ಷ ಕಾರ್ಮಿಕರಿದ್ದಾರೆ, ಮುಖ್ಯ ಕೈಗಾರಿಕಾ ಉತ್ಪನ್ನಗಳು ಎಲೆಕ್ಟ್ರಿಕ್ ಸಾಮಾನುಗಳು, ಯಂತ್ರೋಪಕರಣಗಳು, ರಾಸಯನಿಕ ವಸ್ತುಗಳು, ಔಷಧಗಳು, ಬಟ್ಟೆ ಮುಂತಾದವು. ದಾಲ್‍ಹೆಲ್ಮ್ ಬಡಾವಣೆಯ ವಸ್ತು ಪ್ರದರ್ಶನಾಲಯದಲ್ಲಿ ಪ್ರಪಂಚದ ಅಮೂಲ್ಯ ಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಪಟ್ಟಣದ ಪಶ್ಚಿಮದ ಕಡೆ ಹಾವೆಲ್ ನದಿ ದಂಡೆಯ ಗ್ರೊನೆವಾಲ್ಟ್ ಪ್ರದೇಶದಲ್ಲಿ 1936ರ ಒಲಂಪಿಕ್ ಪಂದ್ಯಗಳಿಗಾಗಿ ಕಟ್ಟಿದ ಏಕಕಾಲದಲ್ಲಿ ಸುಮಾರು 10,000 ಮಂದಿ ಕುಳಿತುಕೊಳ್ಳುವಂತಹ ಒಲಂಪಿಕ್ ಸ್ಟೇಡಿಯಮ್ ಇದೆ. ಜೂನ್ ತಿಂಗಳಲ್ಲಿ ನಡೆಯುವ ಬರ್ಲಿನ್ ಫಿಲ್ಮೋತ್ಸವ ಹಾಗೂ ಸೆಪ್ಟೆಂಬರ್ ತಿಂಗಳ ಬರ್ಲಿನ್ ಕಲಾ ಉತ್ಸವಗಳು ಇಲ್ಲಿನ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಮುಖ್ಯವೆನಿಸಿವೆ. ನಗರದ ದಾಲ್‍ಹೆಲ್ಮ್ ವಿಶ್ವವಿದ್ಯಾಲಯದ ಸ್ಥಾಪನೆ 1948ರಲ್ಲಿ. 1799ರಲ್ಲಿ ಸ್ಥಾಪಿತವಾದ ಟೆಕ್ನಿಕಲ್ ಯೂನಿವರ್ಸಿಟಿಯ ಪುನವ್ರ್ಯಸ್ಥೆಯನ್ನು 1946ರಲ್ಲಿ ಮಾಡಲಾಯಿತು. 80ಕ್ಕೂ ಹೆಚ್ಚು ಗ್ರಂಥಾಲಯಗಳು ಇದ್ದು ಅಮೆರಿಕನ್ ಮೆಮೋರಿಯಲ್ ಲೈಬ್ರರಿಯಲ್ಲಿ 2ಲಕ್ಷ ಗ್ರಂಥಗಳಿವೆ. ಪಶ್ಚಿಮ ಬರ್ಲಿನಿನಲ್ಲಿ ಅಮೆರಿಕನ್ನರ ಕೊಡಗೆಯಾದ ಸ್ವಾತಂತ್ರ್ಯ ಗಂಟೆಯಿದೆ.

	ಪಶ್ಚಿಮ ಬರ್ಲಿನ್ ಆಡಳಿತ ಕಚೇರಿ ಷ್ಯೋನೆಬರ್ಗ್ ನಗರಭವನದಲ್ಲಿದೆ. ನಾಲ್ಕು ವರ್ಷಗಳಿಗೊಮ್ಮೆ ಚುನಾಯಿತ 137 ಮಂದಿ ಪ್ರತಿನಿಧಿಗಳ ಸಭೆ ನಗರಾಧ್ಯಕ್ಷನ ಮೂಲಕ ನಗರಾಡಳಿತವನ್ನು ನಡೆಸುವುದು. ಪಶ್ಚಿಮ ಬರ್ಲಿನ್ ಭೌಗೋಳಿಕವಾಗಿ ಪಶ್ಚಿಮ ಜರ್ಮನಿಯ ಅವಿಚ್ಛಿನ್ನ ಭಾಗವಾಗಿಲ್ಲದಿದ್ದರೂ ಪಶ್ಚಿಮ ರಾಷ್ಟ್ರಗಳು 1950ರಲ್ಲಿ ನೀಡಿರುವ ಸನ್ನದ್ದಿನ ಪ್ರಕಾರ ಪಶ್ಚಿಮಬರ್ಲಿನ್‍ಗೆ ನಗರ ಹಾಗೂ ಒಂದು ಪ್ರಾಂತ್ಯದ ಸ್ಥಾನಮಾನಗಳಿದ್ದು, ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಪಶ್ಚಿಮ ಜರ್ಮನಿಯ ಆರ್ಥಿಕ ನೆರವಿನಿಂದ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸುತ್ತಿದೆ.

	ಪೂರ್ವ ಬರ್ಲಿನ್: ಪೂರ್ವ ಜರ್ಮನ್ ಪ್ರಜಾತಂತ್ರಗಣರಾಜ್ಯದ ರಾಜಧಾನಿ ವಿಸ್ತೀರ್ಣ 404 ಚಕಿಮೀ, ರಷ್ಯನರು 1961ರಲ್ಲಿ ಕಟ್ಟಿದ ಗೋಡೆ ಪೂರ್ವ ಬರ್ಲಿನ್ ನಗರವನ್ನು ಹೊರಗಿನ ಸಂಪರ್ಕದಿಂದ ಹೊರತುಪಡಿಸಿದೆ. ಗೋಡೆಯ ಉದ್ದಕ್ಕೂ ವಿದ್ಯುತ್ ಬೇಲಿಯುಂಟು. ರಷ್ಯ ಸರ್ಕಾರ ಅಲ್ಲಿಯ ರೇಡಿಯೊ, ಟೆಲಿವಿಷನ್ ಮತ್ತು ಪತ್ರಿಕೆಗಳನ್ನು ನಿಯಂತ್ರಿಸಿದೆ. ಹಳೆಯ ಬರ್ಲಿನ್ ಪಟ್ಟಣದ ಬ್ರಾಂಡ್‍ನ್‍ಬರ್ಗ್ ಬಾಗಿಲು, ಯುಂಟರ್ ಡೆನ್ ಲಿನ್‍ಡನ್ ವೃಕ್ಷಸಾಲಿನ ಮಾರ್ಗ, ನಾಟಕಶಾಲೆ, ಜರ್ಮನ್, ವಿಜ್ಞಾನ ಅಕಾಡೆಮಿ (1700), ಮಾಕ್ರ್ಸ್ ಎಂಜೆಲ್ಸ್ ಪ್ಲಾಜ್ ಚೌಕ-ಇವು ಈ ಪಟ್ಟಣದಲ್ಲಿವೆ. ಪರ್‍ಗೆಮನ್ ವಸ್ತು ಸಂಗ್ರಾಹಲಯದಲ್ಲಿ ಜ್ಯೂಸ್ ದೇವತೆಯ ವೇದಿಕೆ ಎಂಬ ಪ್ರಾಚೀನ ಗ್ರೀಕ್ ಶಿಲ್ಪರಚನೆಯ ಸಂಗ್ರಹವಿದೆ, ಸುಮಾರು 5 ಕಿಮೀ ಉದ್ದದ ಫ್ರಾಂಕ್‍ಫರ್ಟ್‍ರಾಲೀಕ ಎಂಬ ಮಾರ್ಗದಲ್ಲಿ ಯುದ್ಧಾನಂತರ ಕಟ್ಟಿದ ಬೃಹತ್ ಕಟ್ಟಡಗಳೂ ವಾಸದ ಬಹುಮಹಡಿ ಕಟ್ಟಡಗಳೂ ಇವೆ.

	ಪೂರ್ವಬರ್ಲಿನಿನಲ್ಲಿ 1948ರಲ್ಲಿ ಕಮ್ಯುನಿಸ್ಟ್ ಸರ್ಕಾರದ ಸ್ಥಾಪನೆಯಾಗಿ ಈ ನಗರವನ್ನು 1949ರಲ್ಲಿ ಪೂರ್ವ ಜರ್ಮನಿಯ ರಾಜಧಾನಿಯಾಗಿ ಮಾಡಲಾಯಿತು. ನಗರಾಡಳಿತಕ್ಕೆ ಒಬ್ಬ ಮೇಯರ್, ಮೂವರು ಡೆಪ್ಯುಟಿ ಮೇಯರಗಳು ಮತ್ತು 14 ಜನ ಸದಸ್ಯರುಗಳ ಸಭೆಯಿದೆ. ಶಿಕ್ಷಣ ಸರ್ಕಾರದ ನಿಯಂತ್ರಣದಲ್ಲಿದೆ. ಇಲ್ಲಿಯ ಮುಖ್ಯ ಕೈಗಾರಿಕಾ ಉತ್ಪನ್ನಗಳೆಂದರೆ ವಿದ್ಯುತ್ ಸಲಕರಣೆಗಳು ಯಂತ್ರಗಳು, ಮೋಟಾರು ವಾಹನಗಳು, ರಾಸಾಯನಿಕ ವಸ್ತುಗಳು ಇತ್ಯಾದಿ.

	1871ರಿಂದ 1945ರ ತನಕ ಜರ್ಮನಿಯ ರಾಜಧಾನಿಯಾಗಿದ್ದ ಬರ್ಲಿನ್ ನಗರದ ಬೆಳವಣಿಗೆ ಐತಿಹಾಸಿಕವಾದದ್ದು. ಇಂದಿನ ಪೂರ್ವ-ಪಶ್ಚಿಮ ಬರ್ಲಿನ್‍ಗಳೆರಡರ ಒಟ್ಟು ವಿಸ್ತೀರ್ಣ 883 ಚಕಿಮೀ, ಜನಸಂಖ್ಯೆ, 30,96,235 ಸಮುದ್ರಮಟ್ಟಕ್ಕೆ 35 ಮೀ ಎತ್ತರವಿರುವ ಬರ್ಲಿನ್ ನಗರ ಮರಳಿನಿಂದ ಕೂಡಿರುವ ಸಮತಟ್ಟಾದ ಮೈದಾನ ಪ್ರದೇಶದಲ್ಲಿ ಸ್ಟ್ರೇ ನದಿಯ ಎರಡೂ ದಂಡೆಗಳ ಮೇಲೆ ಬೆಳೆದುಕೊಂಡಿದೆ. ಈ ನದಿ ಪಶ್ಚಿಮ ಬರ್ಲಿನ್ನಿನ ಸ್ವಾನಡೊ ಬಳಿ ಹಾವೆಲ್ ನದಿಯನ್ನು ಕೂಡಿಕೊಳ್ಳುತ್ತದೆ. ಬರ್ಲಿನ್ ನಗರ ಹದಿನೇಳನೆಯ ಶತಮಾನದಲ್ಲಿ ನಿರ್ಮಿತವಾದ ಕಾಲುವೆಗಳಿಂದ ಕೂಡಿದೆ. ಇವು ಜಲಸಂಚಾರಕ್ಕೆ ಅನುಕೂಲವಾಗಿವೆ.

	ಎರಡನೆಯ ಮಹಾಯುದ್ಧಕ್ಕೆ ಮೊದಲು ಬರ್ಲಿನ್ ಯೂರೋಪಿನ ಒಂದು ಚಿಕ್ಕ ಪಟ್ಟಣ, ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ಈ ನಗರ ಆಲ್ಬ್‍ನದಿಯ ಪೂರ್ವದಂಡೆಯ ಮೇಲಿನ ಸ್ವಲ್ಪ ಭಾಗವನ್ನು ಒಳಗೊಂಡಿತ್ತು. ಮುಂದೆ ಸ್ಟ್ರೇ ನದಿ ದಕ್ಷಿಣದಲ್ಲಿ ಬರ್ಲಿನ್, ಉತ್ತರದಲ್ಲಿ ಕಲ್ನ್ ಪಟ್ಟಣಗಳು ಅಭಿವೃದ್ಧಿ ಹೊಂದಿದವು. 1307ರಿಂದೀಚೆಗೆ ಈ ಎರಡು ನಗರಗಳೂ ಒಂದೇ ಆಡಳಿತ ಮತ್ತು ನ್ಯಾಯಾಲಕ್ಕೆ ಒಳಪಟ್ಟವು. 1640ರಿಂದ 1688ರ ತನಕ ಬ್ರಾಂಡೆನ್ ಬರ್ಗ್‍ನ್ನೂ ಆಳಿದ ಫ್ರೆಡರಿಕ್ ವಿಲಿಯಮನ ಕಾಲದಲ್ಲಿ ಬರ್ಲಿನ್ ಅಭಿವೃದ್ಧಿಯಾಯಿತು. ಓಡರ್ ಮತ್ತು ಸ್ಪ್ರೇ ನದಿ ಮಧ್ಯೆ ಕಾಲುವೆ ತೆಗೆಯಲಾಯಿತು. ಇವನ ಮಗ ಮೊದಲನೆಯ ಫ್ರೆಡರಿಕ್ 1701ರಲ್ಲಿ ಪ್ರಷ್ಯಾದ ದೊರೆಯಾಗಿ ಬರ್ಲಿನ್ ಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡ. ಬರ್ಲಿನ್ ಸುತ್ತಲಿದ್ದ ಮೂರು ಗ್ರಾಮಗಳನ್ನು ಕಲ್ನ್ ಪಟ್ಟಣವನ್ನೂ 1709ರಲ್ಲಿ ಬರ್ಲಿನ್ ನಗರಕ್ಕೆ ಸೇರಿಸಲಾಯಿತು.

	ಮುಂದೆ 7 ವರ್ಷಗಳ ಯುದ್ಧಕಾಲದಲ್ಲಿ, (1756-63) ಆಸ್ಟ್ರಿಯನ್ನರು ಮತ್ತು ರಷ್ಯನ್ನರು ಬರ್ಲಿನನ್ನು ಕೆಲವುಕಾಲದಲ್ಲಿ. ಕೆಲವುಕಾಲ ಆಕ್ರಮಿಸಿಕೊಂಡಿದ್ದರೂ ನಗರದ ಬೆಳೆವಣಿಗೆಗೆ ಅದರಿಂದ ಯಾವ ತಡೆಯೂ ಆಗಲಿಲ್ಲ. 1806ರಿಂದ 1809ರತನಕ ಬರ್ಲಿನ್ ನಗರವನ್ನು ಒಂದನೆಯ ನೆಪೋಲಿಯನ್ ಆಕ್ರಮಿಸಿದ್ದು ಫ್ರೆಂಚರ ಆಡಳಿತಕ್ಕೆ ಒಳಗಾಗಿತ್ತು. ಮುಂದೆ 1871ರಲ್ಲಿ ಜರ್ಮನ್ ರಾಜ್ಯ ಸ್ಥಾಪನೆಯಾದಾಗ ಬರ್ಲಿನ್ ಅದರ ರಾಜಧಾನಿಯಾಯಿತು.

	1912ರಲ್ಲಿ ಗ್ರೇಟನ್ ಬರ್ಲಿನ್ ನಗರ ರೂಪುಗೊಂಡು 1920ರಲ್ಲಿ ಬರ್ಲಿನ್ನಿನ ಉಪನಗರಗಳಿಗೆಲ್ಲ ಅನ್ವಯಿಸಿದಂತೆ ಏಕೈಕ ಆಡಳಿತ ವ್ಯವಸ್ಥೆಯಿಂದ ಕೂಡಿದ ಬರ್ಲಿನ್ನಿನ ನೂತನ ನಗರಸಭೆ ಏರ್ಪಟ್ಟಿತು. ನಗರದ ಬೆಳೆವಣಿಗೆ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಆರಂಭವಾದ ಜರ್ಮನ್ ರೈಲ್ವೆಯ ನಿರ್ಮಾಣಕಾರ್ಯ ಮುಖ್ಯವಾದದ್ದು. ಇದರಿಂದ ಹನ್ನೆರಡಕ್ಕೂ ಹೆಚ್ಚು ರೈಲುಮಾರ್ಗಗಳ ಕೇಂದ್ರ ಬರ್ಲಿನ್ ಆಯಿತು. ಆಂತರಿಕ ಸಂಚಾರಕ್ಕೆ 1871ರಲ್ಲಿ ವೃತ್ತರೈಲ್ವೆ, ಈ ವೃತ್ತ ರೈಲ್ವೆಗೆ ಸಂಪರ್ಕವನ್ನು ಹೊಂದಿದ ನಗರರೈಲ್ವೆಗಳ ನಿರ್ಮಾಣವಾಯಿತು. ನಗರದ ಉತ್ತರ ಮತ್ತು ದಕ್ಷಿಣ ವಲಯಗಳಿಗೆ ಸಂಪರ್ಕವೇರ್ಪಡಿಸಲು 1914ಕ್ಕೆ ಮುಂಚೆಯೆ ಆರಂಭವಾದ ಸುರಂಗ ಮಾರ್ಗ 1923ರಲ್ಲಿ ಪೂರ್ಣಗೊಂಡು ಸಂಚಾರಕ್ಕೆ ತೆರೆಯಲಾಯಿತು. ಹಾಗೆ ಕೆಲವು ಕಾಲುವೆಗಳನ್ನು ನಿರ್ಮಿಸಿ ನದಿ ಸಂಪರ್ಕಪಡೆದು ಜಲಮಾರ್ಗಗಳ ಅಭಿವೃದ್ಧಿಯಾಯಿತು. 1939ರ ವೇಳೆಗೆ ಬರ್ಲಿನ್ ನಗರ ಯೂರೋಪಿನ ಒಂದು ಪ್ರಮುಖ ಕೈಗಾರಿಕೆ ಮತ್ತು ವಾಣಿಜ್ಯನಗರವಾಗಿತ್ತು. ಆಗ ಇದು ಪ್ರಪಂಚದ ದೊಡ್ಡ ನಗರಗಳಲ್ಲಿ ಆರನೆಯದಾಗಿತ್ತು. ಕಬ್ಬಿಣ ಉಕ್ಕು ಮತ್ತು ಬಟ್ಟೆಗಳೂ ಹಾಗೂ ಅವುಗಳಿಗೆ ಸಂಬಂಧಪಟ್ಟ ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿಯಿತು. ಎಂಜಿನ್‍ಗಳು, ಹೊಲಿಗೆ ಯಂತ್ರಗಳು ಬೈಸಿಕಲ್ಲುಗಳು, ಕ್ರೊನಾಮೀಟರ್ (ಕಾಲಮಾಪಕ), ವಿದ್ಯುತ್ ಉಪಕರಣಗಳು, ರಾಸಾಯನಿಕ ವಸ್ತು ಮೊದಲಾದವು ಮುಖ್ಯ ಉತ್ಪಾದನೆಗಳಾಗಿದ್ದವು. ವಿವಿಧ ಮಾದಕ ಪಾನೀಯಗಳ ಹೇರಳ ತಯಾರಿಕೆಯೂ ಇತ್ತು. ಇವುಗಳಲ್ಲದೆ ಬರ್ಲಿನ್ ನಗರ ಗೋದಿ, ರೈ ಮತ್ತಿತರ ಧಾನ್ಯಗಳ ಪ್ರಮುಖ ಮಾರುಕಟ್ಟೆಯಾಗಿದ್ದು ಅಲ್ಲಿಗೆ ಸಮುದ್ರದ ಮೂಲಕ ಪೂರ್ವ ಜರ್ಮನಿ ಪೋಲೆಂಡ್, ಆಸ್ಟ್ರಿಯ ಮತ್ತು ರಷ್ಯಗಳಿಂದ ಪದಾರ್ಥಗಳು ಬರುತ್ತಿದ್ದವು. ಈ ನಗರ ಗ್ರಂಥಗಳ ಪ್ರಕಟಣೆಯಲ್ಲಿ ಕೇಂದ್ರವಾಗಿದ್ದು ಲೈಪ್ಸಿಂಗ್ ನಗರವನ್ನೂ ಮೀರಿಸಿತ್ತು.

	ಬರ್ಲಿನ್‍ನಲ್ಲಿರುವ ಹಿಂದಿನ ರಾಜನ ಅರಮನೆಯನ್ನು 1921ರಲ್ಲಿ ಕುಂಭಗಳು, ಬೆಳ್ಳಿ ಮತ್ತು ಮರದ ವಿವಿಧ ವಸ್ತುಗಳ ಸಲಾಸ್ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು. ನಾಟಕಶಾಲೆ ಮತ್ತು ರಂಗಭೂಮಿಗೆ ಪ್ರೋತ್ಸಾಹ ನೀಡಲಾಯಿತು. ಪಶ್ಚಿಮ ಬರ್ಲಿನ್ನಿನ ಒಲಂಪಿಕ್ ಸ್ಟೇಡಿಯಮ್ ಹತ್ತಿರದಲ್ಲೇ ರೇಡಿಯೋ ಪ್ರಸಾರ ಕೇಂದ್ರವನ್ನೂ ಸ್ಥಾಪಿಸಲಾಯಿತು. ಆಗ ನಗರ ವಿವಿಧ ಮರಗಳ ಕಾಡಿನಿಂದ ಸುತ್ತುವರಿದಿದ್ದು ಅದರ ಪಶ್ವಿಮಕ್ಕಿರುವ ಹಾವೆಲ್ ಸರೋವರಗಳ ಪಂಕ್ತಿಯನ್ನು ಸುಂದರಮಯವಾಗಿ ಮಾಡಿದ್ದವು. 1871ರಲ್ಲಿ ವೃತ್ತರೈಲ್ವೆ ಆರಂಭವಾದ ಮೇಲೆ ನಗರದ ಸುತ್ತಲಿದ್ದ ಗ್ರಾಮಗಳೆಲ್ಲವೂ ನವೀನ ಒಸತಿ ಪ್ರದೇಶಗಳಾಗಿ ಮಾರ್ಪಟ್ಟು ನಗರ ಬೆಳೆದು ವಿಸ್ತರಿಸಿತು.

	ಮೊದಲು ಮಹಾಯುದ್ಧ 1918ರಲ್ಲಿ ಮುಗಿದಾಗ ಬರ್ಲಿನ್ ಮತ್ತೆ ಹೊಸ ಜರ್ಮನ್ ಪ್ರಜಾಪ್ರಭುತ್ವದ ರಾಜಧಾನಿಯಾಯಿತು. ದೊಂಬಿ, ಮುಷ್ಕರ ಮತ್ತು ಹಣದುಬ್ಬರಗಳಿಂದ ನಗರದ ಜೀವನ ದುಸ್ತರವಾದರೂ ನಗರ ಮಾತ್ರ ಬೆಳೆದು ವಿಸ್ತರಿಸುತ್ತಲೇ ಹೋಯಿತು. ನಿರುದ್ಯೋಗ, ಹಸಿವು ಆರ್ಥಿಕ ತೊಂದರೆಗಳಿಂದ ಬೇಸತ್ತಿದ್ದ ನಗರದ ಜನತೆ 1933ರಲ್ಲಿ ಹಿಟ್ಲರನ್ನು ಅಧಿಕಾರಕ್ಕೆ ತಂದಿತು. 

	ಎರಡನೆಯ ಮಹಾಯುದ್ಧದ 1939-45, ಜರ್ಮನಿ ಮಿತ್ರ ರಾಷ್ಟ್ರಗಳ ದಾಳಿಗೆ ತುತ್ತಾಗಿ ಇಡೀ ಬರ್ಲಿನ್ ನಗರದ ಮುಕ್ಕಾಲುಭಾಗ ನಾಶವಾಯಿತು 1945 ಮೇ 2ರಂದು ಬರ್ಲಿನ್ ನಗರವನ್ನು ಸೋವಿಯತ್ ಸೈನ್ಯ ವಶಪಡಿಸಿಕೊಂಡಿತು. ಯುದ್ಧ ಮುಗಿದ ಮೇಲೆ ನಗರ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಲಾಯಿತು. ಕಲಾಕೃತಿಗಳ ಸಂಗ್ರಹಾಲಯವನ್ನಾಗಿ ಉಪಯೋಗಿಸುತ್ತಿದ್ದ ರಾಜಕುಮಾರನ ಹಿಂದಿನ ಅರಮನೆಯನ್ನೂ ಸರ್ಕಾರದ ನಾಟಕ ಶಾಲೆಯನ್ನೂ ಕೆಲವು ಕಟ್ಟಡಗಳನ್ನೂ ದುರಸ್ತುಗೊಳಿಸಲಾಯಿತು. ಎರಡನೆಯ ಮಹಾಯುದ್ಧಕ್ಕೆ ಮೊದಲು 1939 ಮೇ ತಿಂಗಳಲ್ಲಿ ಮಾಡಿದ ಜನಸಂಖ್ಯಾ ಗಣತಿಯ ಪ್ರಕಾರ ಬರ್ಲಿನ್ ನಗರದಲ್ಲಿ 4,332, 242 ಜನಸಂಖ್ಯೆ ಇದ್ದಿದ್ದು ಯುದ್ಧಾನಂತರ 1946 ಅಕ್ಟೋಬರಿನಲ್ಲಿ ಮಾಡಿ ಜನಗಣತಿಯ ಪ್ರಕಾರ ಬರ್ಲಿನಿನ ಜನಸಂಖ್ಯೆ 3,180, 383ಕ್ಕೆ ಇಳಿದಿದ್ದಿತು.

	ಬರ್ಲಿನ್ ನಗರಾಡಳಿತದ ಮೇಲ್ವಿಚಾರಣೆ ನೋಡಿಕೊಳ್ಳಲು ರಷ್ಯ. ಅಮೆರಿಕ, ಬ್ರಿಟನ್ ಮತ್ತು ಫ್ರೆಂಚ್ ಪ್ರತಿನಿಧಿಗಳನ್ನೊಳಗೊಂಡ ನಾಲ್ವರು ಮಿಲಿಟೆರಿ ಅಧಿಕಾರಿಗಳನ್ನು ನೇಮಿಸಲಾಯಿತು. ಬರ್ಲಿನ್‍ನಗರ ಮತ್ತು ಅದರ ಜಿಲ್ಲೆಗಳನ್ನು ನಾಲ್ಕುಭಾಗಗಳಾಗಿ ವಿಂಗಡಿಸಲಾಯಿತು. ಸೋವಿಯತ್ ಆಕ್ರಮಿತ ಜರ್ಮನಿಯ ಮಧ್ಯದಲ್ಲಿ ಬರ್ಲಿನ್ ಇದ್ದುದರಿಂದ ಮಿತ್ರ ರಾಷ್ಟ್ರಗಳ ನಿಯಂತ್ರಣ ಸಮಿತಿ ಪಶ್ಚಿಮದಕಡೆ ಹೋಗಿಬರಲು ಬರ್ಲಿನ್ ಹ್ಯಾಂಬರ್ಗ್, ಬರ್ಲಿನ್-ಹ್ಯಾನೋವರ್ ಮತ್ತು ಬರ್ಲಿನ್-ಫ್ರಾಂಕ್‍ಫರ್ಟ್‍ಗಳಿಗೆ ಮೂರು ವಾಯುಮಾರ್ಗಗಳನ್ನು ನವಂಬರ್ 30ರಲ್ಲಿ ಏರ್ಪಡಿಸಿತು. ಬಹಳಮಟ್ಟಿಗೆ ಪಶ್ಚಿಮ ವಿಭಾಗಗಳು ಬರ್ಲಿನ್ನಿಗೆ ಸಾಮಾನು ಸರಂಜಾಮುಗಳ ಸಾಗಾಣಿಕೆಗೆ ಭೂ ಮತ್ತು ಜಲಮಾರ್ಗವನ್ನೇ ಅವಲಂಬಿಸಿದ್ದವು. ಮುಂದೆ ಬರ್ಲಿನ್ ಆಡಳಿತ ವಿಷಯದಲ್ಲಿ ಪಶ್ಚಿಮರಾಷ್ಟ್ರಗಳಿಗೂ ರಷ್ಯಕ್ಕೂ ಹೊಂದಾಣಿಕೆಯಾಗದೆ ವಿರಸವುಂಟಾಗಿ ಅದು ಬರ್ಲಿನ್ ನಗರವನ್ನು ಪಶ್ಚಿಮ ಬರ್ಲಿನ್, ಪೂರ್ವಬರ್ಲಿನ್ ಎಂದು ಒಡೆಯಿತು. 1948ಜೂನ್ 24ರಿಂದ ರಷ್ಯ ಪಶ್ಚಿಮ ಬರ್ಲಿನಿಗೆ ಇದ್ದ ಜಲ, ರೈಲು ಮತ್ತು ಹೆದ್ದಾರಿಗಳನ್ನಲ್ಲ ಮುಚ್ಚಿ ನಿರ್ಬಂಧಿಸಿತು. ಈ ನಿರ್ಬಧದಿಂದಾಗಿ ಪಶ್ಚಿಮ ಜರ್ಮನಿಯ ಪ್ರಜೆಗಳಿಗೆ ಅಗತ್ಯ ವಸ್ತುಗಳ ಕೊರತೆಯುಂಟಾಗಿ ಹಾಗೂ ಮಿತ್ರರಾಷ್ಟ್ರಗಳ ಸೈನಿಕರು. ಅಧಿಕಾರಿಗಳು ಬರ್ಲಿನ್‍ಬಿಟ್ಟು ಹೋಗುತ್ತಾರೆಂದು ರಷ್ಯಭಾವಿಸಿತ್ತೆಂದು ಹೇಳುವರು. ಇದಲ್ಲದೆ ನಾಲ್ಕು ರಾಷ್ಟ್ರಗಳ ಅಧಿಕಾರ ವ್ಯವಸ್ಥೆ ಕೊನೆಗೊಂಡಿತೆಂದು 1948 ಜುಲೈ 1ರಂದು ರಷ್ಯ ಘೋಷಿಸಿ ಪಶ್ಚಿಮರಾಷ್ಟ್ರಗಳಿಗೆ ಬರ್ಲಿನ್ನಿನಲ್ಲಿರಲು ಯಾವ ಹಕ್ಕೂ ಇಲ್ಲವೆಂದು ತಿಳಿಸಿತು. ಅಮೆರಿಕ ಮತ್ತು ಗ್ರೇಟ್ ಬ್ರಿಟನ್‍ಗಳು ಪಶ್ಚಿಮ ಬರ್ಲಿನ್‍ಗೆ ವಿಮಾನಗಳ ಮೂಲಕ ಆವಶ್ಯಕ ವಸ್ತುಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಿ ಪಶ್ಚಿಮ ಬರ್ಲಿನ್ ಪ್ರಜೆಗಳು ಎದೆಗುಂದದಂತೆ ನೋಡಿಕೊಂಡಿದ್ದಲ್ಲದೆ ರಷ್ಯದ ಯೋಜನೆಯನ್ನು ವಿಫಲಗೊಳಿಸಿದವು. 

	ಪಶ್ಚಿಮ ಬರ್ಲಿನ್ನಿನ ಮೇಲೆ ರಷ್ಯ ವಿಧಿಸಿದ ದಿಗ್ಬಂಧನ ಪೂರ್ವ ಜರ್ಮನಿಯ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಿತು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ನಡೆದ ಮಾತುಕತೆಯ ಪರಿಣಾಮವಾಗಿ ರಷ್ಯ 1949 ಮೇ ತಿಂಗಳಲ್ಲಿ ದಿಗ್ಬಂಧನವನ್ನು ತೆಗೆದುಹಾಕಿತು. ಆದಾಗ್ಯೂ ವಿಮಾನದ ಮೂಲಕ ಪಶ್ಚಿಮ ಬರ್ಲಿನ್‍ಗೆ ಸರಬರಾಜು ವ್ಯವಸ್ಥೆ 1949 ಸೆಪ್ಟೆಂಬರ್ 30ರ ತನಕವೂ ಮುಂದುವರಿಯಿತು. ಪಶ್ಚಿಮ ಬರ್ಲಿನ್ ಹಾಗೂ ಪೂರ್ವ ಬರ್ಲಿನ್ ತಮ್ಮ ಅಗತ್ಯಗಳಿಗೆ ಪರಸ್ಪರ ಅವಲಂಬನೆ ಬೇಡವೆಂದು ತಮಗೆ ಬೇಕಾದುದರ ಸ್ವಯಂಪೂರ್ಣತೆ ಹಾಗೂ ಸರಬರಾಜುಗೆ ಪ್ರಯತ್ನ ಕೈಗೊಂಡವು. ಇದರಂತೆ ಪೂರ್ವಬರ್ಲಿನ್ ಕಡೆ ಎರಡು ಹೊಸ ರೈಲುಮಾರ್ಗಗಳನ್ನು, ಒಂದು ಕಾಲುವೆಯನ್ನು ರಷ್ಯ 1952ರಲ್ಲಿ ನಿರ್ಮಿಸಿಕೊಂಡಿತು. ತಮ್ಮ ಸಾಧನ ಸಂಪತ್ತುಗಳ ಮತ್ತು ಸೌಲಭ್ಯಗಳನ್ನು ಪೂರ್ವ ಯೂರೋಪಿಗೆ ಪ್ರದರ್ಶಿಸಲು ಪಶ್ಚಿಮ ಯೂರೋಪಿನವರು ಉತ್ಸುಕರಾದರು. ಹಿಂದಿನ ಹಳೆಯ ವಿಶ್ವವಿದ್ಯಾಲಯವು ಪೂರ್ವಭಾಗಕ್ಕೆ ಸೇರಿತು. ಪಶ್ಚಿಮ ಬರ್ಲಿನ್‍ನಲ್ಲಿ ಫ್ರೀ ಯೂನಿವರ್ಸಿಟಿ ಆಫ್ ಬರ್ಲಿನ್ 1948ರಲ್ಲಿ ಸ್ಥಾಪಿಸಲಾಯಿತು. ಮುಂದಿನ ದಶಕಗಳಲ್ಲಿ ಪಶ್ಚಿಮದ ಮಿತ್ರರಾಷ್ಟ್ರಗಳ ಧನಸಹಾಯ ಮತ್ತು ಜರ್ಮನ್ ಫೆಡರಲ್ ರಿಪಬ್ಲಿಕ್ ಸರ್ಕಾರದ ಪ್ರಯತ್ನದಿಂದ ಕೌತುಕಕಾರಿಯಾದ ರೀತಿಯಲ್ಲಿ ಹೊಸ ಕಟ್ಟಡಗಳು ಶಾಲೆಗಳು ಬ್ಯಾಂಕುಗಳು, ಉಪಾಹಾರಗೃಹಗಳು ಸಿನಿಮಾ ಮಂದಿರಗಳು ಮೊದಲಾದವುಗಳ ಪುನರ್ ನಿರ್ಮಾಣಕಾರ್ಯನಡೆದು ಪಶ್ಚಿಮ ಬರ್ಲಿನ್ ಯೂರೋಪಿನ ಸುಂದರ ನಗರಗಳಲ್ಲಿ ಒಂದು ಎನಿಸಿಕೊಂಡಿತು. ಪಶ್ಚಿಮ ಜರ್ಮನಿ ಸರ್ಕಾರ ಪಶ್ಚಿಮ ಬರ್ಲಿನ್‍ಗೆ ಹಣಕಾಸಿನ ಸಹಾಯ ಮಾಡಲು ಒಪ್ಪಿಕೊಂಡಿದ್ದರಿಂದ ಆ ಸರ್ಕಾರದ ಕಾನೂನುಗಳೇ ಪಶ್ಚಿಮ ಬರ್ಲಿನಿಗೂ ಅನ್ವಯಿಸುವಂತೆ ಮಾಡಲಾಯಿತು.

	ಪೂರ್ವ ಬರ್ಲಿನ್‍ನಲ್ಲಿ ಕಷ್ಟಜೀವನ ಸಹಿಸದ ಜನ ಕಮ್ಯೂನಿಸ್ಟ್ ಆಡಳಿತ ವಿರುದ್ದ 1953 ಜೂನ್ 17ರಂದು ದಂಗೆಯೆದ್ದರು. ಪೂರ್ವಜರ್ಮನಿಯ ಕೆಲವು ಕಡೆಗಳಿಗೂ ದಂಗೆ ಹಬ್ಬಿದಾಗ ರಷ್ಯ ತನ್ನ ಸೇನೆಯ ಸಹಾಯದಿಂದ ಅದನ್ನು ಅಡಗಿಸಿತು. ಅದೇ ಜುಲೈ 12ರ ತನಕ ಮಾರ್ಷಲ್ ಲಾ ಜಾರಿಗೆ ತಂದಿತು. 1954 ಮಾರ್ಚ್ 25ರಂದು ರಷ್ಯ ಪೂರ್ವ ಜರ್ಮನಿಯನ್ನು ಸ್ವತಂತ್ರ ಸಾರ್ವಭËಮ ರಾಜ್ಯವೆಂದು ಘೋಷಿಸಿತು. ಪೂರ್ವಬರ್ಲಿನ್ ಈ ಹೊಸ ಗಣರಾಜ್ಯದ ರಾಜಧಾನಿಯಾಯಿತು.

	ಪಶ್ಚಿಮ ಜರ್ಮನಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅನುಭವಿ ಕೆಲಸಗಾರರು ಮತ್ತಿತರರು ಪಲಾಯನ ಮಾಡಿದ ಪರಿಣಾಮವಾಗಿ ಪೂರ್ವಜರ್ಮನಿಯಲ್ಲಿ ಕೆಲಸಗಾರರ ಕೊರತೆಯುಂಟಾಯಿತು. ಪಶ್ಚಿಮ ಮತ್ತು ಪೂರ್ವಜರ್ಮನಿಗಳ ಗಡಿಯನ್ನು 1952 ಮೇಯಲ್ಲಿ ಮುಚ್ಚಿದರೂ ಪೂರ್ವ ಮತ್ತು ಪಶ್ಚಿಮ ಬರ್ಲಿನ್ ನಡುವೆ ಇದ್ದ ಮಾರ್ಗದ ಮೂಲಕ ನಿರಾಶ್ರಿತರು ನಿರಂತರವಾಗಿ ಪಶ್ಚಿಮ ಜರ್ಮನಿಗೆ ವಲಸೆ ಹೋಗುತ್ತಿದ್ದರು. 1957 ಒಂದರಲ್ಲೇ ಪಶ್ಚಿಮ ಜರ್ಮನಿಗೆ ತಪ್ಪಿಸಿಕೊಂಡು ಹೋದ 3,85,000 ಜನರ ಪೈಕಿ ಬಹಳ ಮಂದಿ ಪಶ್ಚಿಮ ಬರ್ಲಿನ್ ಮೂಲಕವೇ ಹೋಗಿದ್ದರು. ಹಾಗೆಯೇ 1958ರಲ್ಲಿ 226,000 ಮಂದಿ, 1959ರಲ್ಲಿ 174,000 ಮಂದಿ ಮತ್ತು  1960ರಲ್ಲಿ 225,000 ಮಂದಿ ನಿರಾಶ್ರಿತರು ವಲಸೆ ಹೋದರು. 1961ರ ಬೇಸಗೆಯ ವೇಳೆಗಾಗಲೇ 234,000 ಜನ ತಪ್ಪಿಸಿಕೊಂಡು ಹೋಗಿದ್ದರು. ಆಗ ಪೂರ್ವ ಜರ್ಮನಿ ಸರ್ಕಾರ ಕ್ರುಶ್ಚೇವ್‍ನ ಅನುಮತಿ ಪಡೆದು ತೀವ್ರಕ್ರಮಗಳನ್ನು ಕೈಗೊಂಡಿತು. 1961 ಆಗಸ್ಟ್ 13ರಂದು ಪೂರ್ವಜರ್ಮನಿ ಅಧಿಕಾರಿಗಳು ಪಶ್ಚಿಮ ಬರ್ಲಿನ್‍ನ್ನು ಪ್ರತ್ಯೇಕಿಸಲು ಮುಳ್ಳುತಂತಿಯ ಬೇಲಿಯನ್ನು ಹಾಕಿದರು. ಅನಂತರ ಸುಮಾರು 1.83 ಮೀಟರ್ ಎತ್ತರದ ಕಾಂಕ್ರೀಟ್ ಗೋಡೆಯನ್ನು ನಿರ್ಮಿಸಿ ಅದರ ಮೇಲೆ ಮುಳ್ಳುತಂತಿಯ ಬೇಲಿ ಹಾಕಲಾಯಿತು. ಅಧಿಕಾರಿಗಳು ಹೋಗಿಬರುವ ಮಾರ್ಗದಲ್ಲಿ ಕಾವಲು ಪಡೆ ಇಡಲಾಯಿತು; ಮತ್ತು ಗೋಡೆಯ ಮೇಲಿನ ಕಾವಲು ಪಡೆಯವರು ಗೋಡೆಯನ್ನು ಹತ್ತಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವರನ್ನು ಗುಂಡಿಟ್ಟು ಹೊಡೆಯುವುದಕ್ಕೂ ಅವಕಾಶ ನೀಡಲಾಯಿತು. ಈ ವಿಷಯದಲ್ಲಿ ಪಶ್ಚಿಮ ರಾಷ್ಟ್ರಗಳ ವಿರೋಧವನ್ನು ತಳ್ಳಿಹಾಕಲಾಯಿತು. ಆಗಾಗ್ಗೆ ಎರಡೂ ಕಡೆ ಬರ್ಲಿನ್ ಗೋಡೆ ದಾಟಲು ಹೋಗುತ್ತಿದ್ದವರು ಸಾವಿಗೀಡಾಗುತ್ತಿದ್ದರು. ಪೂರ್ವಪಶ್ಚಿಮ ರಾಷ್ಟ್ರಗಳ ಘರ್ಷಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾದ ಮೇಲೆ ಪೂರ್ವ ಜರ್ಮನಿ ಸರ್ಕಾರ ಪೂರ್ವ ಮತ್ತು ಪಶ್ಚಿಮ ಬರ್ಲಿನ್‍ಗಳ ನಡುವೆ ಭೇಟಿಯ ಮೇಲಿನ ಹತೋಟಿಯನ್ನು ಸ್ವಲ್ಪ ಸಡಿಲಗೊಳಿಸಿತು.

	ರಷ್ಯ 1966 ಅಕ್ಟೋಬರ್ 13ರಂದು ಪೂರ್ವ ಬರ್ಲಿನನ್ನು ಜರ್ಮನ್ ಡೆಮೋಕ್ರಾಟಿಕ್ ರಿಪಬ್ಲಿಕ್ ಜೊತೆ ಸೇರಿಸಿತು. 1971ರಲ್ಲಿ ಫ್ರಾನ್ಸ್, ಗ್ರೇಟ್ ಬ್ರಿಟನ್, ರಷ್ಯ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಸಭೆ ಸೇರಿ ಪಶ್ಚಿಮ ಬರ್ಲಿನ್ ಪಶ್ಚಿಮ ಜರ್ಮನಿಯ ಒಂದು ಭಾಗವಲ್ಲದಿದ್ದರೂ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಅದಕ್ಕೆ ಸಂಬಂಧಗಳಿದ್ದು ಅವುಗಳ ನಡುವಿನ ಸಂಪರ್ಕಕ್ಕೆ ಯಾವ ಅಡ್ಡಿಯೂ ಇರಬಾರದೆಂದು ಒಪ್ಪಿಕೊಂಡು ಸಹಿಮಾಡಿದ ಆ ಒಪ್ಪಂದ 1972ರಿಂದ ಜಾರಿಗೆ ತರಲಾಯಿತು. ಇಂದಿನ ಬರ್ಲಿನ್ ಒಂದು ದೊಡ್ಡ ಕೈಗಾರಿಕಾ ನಗರವಾಗಿ, ಜರ್ಮನಿಯ ಆಡಳಿತ ಕೇಂದ್ರವಾಗಿ ಮುನ್ನೆಡೆಯುತ್ತಿದೆ.
(ವಿ.ಜಿ,ಕೆ.; ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ